Experience with Guru Matha

ಓಂ ಶ್ರೀ ಸದ್ಗುರುವೇ ನಮ
ಶುಚಿತ್ವ ಈ ಪದ ಹಾಗು ಅಮ್ಮ, ಅವರು ಪ್ರತಿಯೊಂದು ಕೆಲಸದಲ್ಲೂ ಅದು ಎತ್ತಿ ಕಾಣುತ್ತಿತ್ತು. ಅವರ ಕೆಲಸದ ವೈಖರಿಯನ್ನು ಅರ್ಥ ಮಾಡಿಕೊಳ್ಳುವುದೇ ಒಂದು ಸವಾಲು. ಯಾಕೆ ಎಂದರೆ, ಅವರ ರೀತಿ ನಾನು 1 ಗಂಟೆ ಸಹ ಕೆಲಸ ಮಾಡಲಾರೆ. ಪ್ರತಿಯೊಂದು ಕೆಲಸವು ಬಹಳ ಮುಂದಾಲೋಚನೆ ಮಾಡಿ ಮಾಡುವರೇನೋ ಎನ್ನಿಸುತ್ತಿತ್ತು. ಆದರೆ ಅದು ಅವರಿಗೆ ದೈವ ದತ್ತ, ಚಿಕ್ಕ ವಯಸ್ಸಿನಿಂದಲೂ ಸಹ ಅವರು ಅದನ್ನು ತೋರಿಸಿದ್ದಾರೆ. ಉದಾ: ಅವರು ಚಿಕ್ಕ ವಯಸ್ಸಿನಲ್ಲಿಯೇ ಫ಼ೂಟ್ ರೆಸ್ಟ್ ಅನ್ನು ತುಳಿಯುತ್ತಿರಲಿಲ್ಲವಂತೆ, ಯಾರಾದರೂ ಬಂದು ದಾಟಿಸುವ ತನಕ ಅಲ್ಲೇ ನಿಂತಿರುತ್ತಿದ್ದರಂತೆ. ಈ ರೀತಿಯ ನಡವಳಿಕೆಗಳು ಸಾವಿರಾರು. ಅವರ ಕೆಲಸದಲ್ಲಿ ಅಚ್ಚುಕಟ್ಟುತನ, ಇದೆಲ್ಲವೂ ಅವರನ್ನು ಸಾಮಾನ್ಯ ಜನರ ಗುಂಪಿಗೆ ಸೇರಿಸುವಂತಿರಲಿಲ್ಲ.
ನಾನು ಎಷ್ಟೋ ಬಾರಿ ನೋಡಿದ್ದೇನೆ, ಮನೆಯಲ್ಲಿ ಎಲ್ಲೇ ಧೂಳು, ಕೂದಲು ಅಥವಾ ಒಂದು ಚಿಕ್ಕ ಕಸ ಕಂಡರೂ ಅದರ ಮುಂದಿನ ಜಾಗ ಕಸದಬುಟ್ಟಿ. ಎಷ್ಟೇ ಕೆಲಸವಿರಲಿ, ಎಷ್ಟೇ ದಣಿದಿರಲಿ ಇವೆಲ್ಲದರಿಂದ ತಪ್ಪಿಸಲು ಸಾಧ್ಯವಿರಲಿಲ್ಲ.
ಅವರು ತಮ್ಮನ್ನು ಹಾಗು ತಮ್ಮ ಪರಿಸರವನ್ನು ಅಷ್ಟು ಶುದ್ದತೆಯಿಂದ ಕಾಪಾಡಿಕೊಂಡಿದ್ದರೇ, ಅವರ ಮನಸ್ಸನ್ನು ಇನ್ನೆಷ್ಟು ಪರಿಶುದ್ದವಾಗಿ ಇಟ್ಟಿರುತ್ತಿದ್ದರು ಎಂಬ ಯೋಚನೆ ಬರುತ್ತದೆ. ಆದರೆ ಆ ಮನಸ್ಸಿನ ಪರಿಶುದ್ದತೆ ಅವರ ಮುಖದಲ್ಲಿ ಹಾಗೂ ಅವರ ಗುಣವನ್ನು ಪ್ರತಿಬಿಂಬಿಸುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಯಾರ ಬಗ್ಗೆಯೂ ದ್ವೇಷವಿಲ್ಲ, ಯಾರ ಬಗ್ಗೆಯೂ ಅತಿಯಾದ ಪ್ರೀತಿಯಿಲ್ಲ, ಎಲ್ಲರ ಹಾಗು ಎಲ್ಲದರ ಬಗ್ಗೆ ಸಮಾನ ಪ್ರೀತಿ, ಈ ಎಲ್ಲಾವೂ ನನಗೆ ಶ್ರೀಕ್ರಿಷ್ಣನು ಭಗವಧ್ಗೀತೆಯಲ್ಲಿ ಸ್ಥಿತಪ್ರಜ್ಞನ ವರ್ಣನೆಯನ್ನು ಕಣ್ಣಾರೆ ಕಂಡಂತೆ ಭಾಸವಾಗುತ್ತಿತ್ತು ಅಂದರೆ ದುಖಃವುಂಟಾದಾಗ ಉದ್ವೇಗಗೊಳ್ಳದೇ ಸುಖವುಂಟಾದಾಗ ಅದರಲ್ಲಿ ಅಭಿಲಾಷೆಯಿಲ್ಲದೆ ಮತ್ತು ಆಸಕ್ತಿ ಭಯ ಹಾಗೂ ಕ್ರೋಧಗಳಿಲ್ಲದವರು. ಅಂತಹವರನ್ನು ಮುನಿಯು “ಸ್ಥಿರಬುದ್ದಿಯುಳ್ಳವನೆಂದು” ಹೇಳಲ್ಪಡುತ್ತಾನೆ. ಈ ಸ್ಥಿತಿಗೆ ಬರಲು ಕ್ರಿಷ್ಣನು ಭಗವಧ್ಗೀತೆಯಲ್ಲಿ ಬಹಳ ಉಪಾಯಗಳನ್ನು ಹೇಳಿದ್ದಾನೆ.
ಅಂತಹ ಸ್ಥಿತಿಯಲ್ಲಿ ಅಮ್ಮ ಸಹಜವಾಗಿ ಯಾವಾಗಲೂ ಇರುತ್ತಿದ್ದರು. ಅವರು ಮಿತಭಾಷಿ, ಅಂದರೆ ಮೌನದಿಂದ ಹಾಗೂ ಅವರ ನಡವಳಿಕೆಯಿಂದ ಬಹಳಷ್ಟು ಮಾತನಾಡುತ್ತಿದ್ದರು. ಅದನ್ನು ಸ್ವಲ್ಪವಾದರೂ ಅರ್ಥಮಾಡಿಕೊಂಡವರೇ ಪುಣ್ಯವಂತರು. ಈ ರೀತಿಯ ಜ್ಞಾನ ಗಂಟೆಗಟ್ಟಲೆ ಪ್ರವಚನ ಕೇಳಿದರೆ, ಜಪಮಾಡಿದರೆ, ಪೂಜೆ ಮಾಡಿದರೇ ಬರುವಂತದ್ದಲ್ಲ, ಇದನ್ನು ಅಮ್ಮ ಅವರನ್ನು ನೋಡಿ ಅರ್ಥಮಾಡಿಕೊಂಡರೆ ಸಾಕು ಚೆನ್ನಾಗಿಯೆ ಮನಸ್ಸಿಗೆ ನಾಟಿ ಬಿಡುತ್ತಿತ್ತು.
ಸಹನೆ- ಗುರುಗಳು ಬೆಂಗಳೂರಿಗೆ ಬಂದ ಹೊಸತು. ನಾವು ನಮ್ಮ ಬವಣೆಗಳಲ್ಲಿ ಸಿಲುಕಿ ನಲುಗುತ್ತಿದ್ದಂತ ಸಮಯ, ಆಗ ವಾರಕ್ಕೆ ಒಮ್ಮೆ ಗುರುಗಳ ದರ್ಶನಕ್ಕೆ ಹೋಗುತ್ತಿದ್ದೆ. ಅಲ್ಲಿ ಇರುತ್ತಿದ್ದ 30 ನಿಮಿಷದ ಸಮಯದಲ್ಲಿ ಅಮ್ಮನ ಜೊತೆ 10 ರಿಂದ 15 ನಿಮಿಷ ಇರುವಂತಾಗುತ್ತಿತ್ತು. ಅವರ ಜೊತೆ ಮಾತನಾಡುತ್ತಿದ್ದರೆ, ಹಾಗು ಅವರನ್ನು ಸಾಮೀಪ್ಯದಿಂದ ಗಮನಿಸುತ್ತಿದ್ದರೆ ನನಗೆ ಒಂದು ವಾರಕ್ಕೆ ಆಗುವಷ್ಟು ಸಹನೆ ಮತ್ತು ಶಾಂತಿ ಸಿಗುತ್ತಿತ್ತು. ಸಂಯಮ, ಶಾಂತಿ, ಸಹನೆ ಇದರ ಅನುಭವಗಳು ನೆಮ್ಮದಿಯನ್ನು ತರುತ್ತಿತ್ತು ಮತ್ತೆ ಅವರ ದರ್ಶನ ಹೀಗೆ ಒಂದು ದಿನ ಏರುಪೇರಾದರೂ, ಮನಸ್ಥಿತಿಯಲ್ಲಿ ಏರುಪೇರಾಗುತ್ತಿತ್ತು. ಎಂದಿಗೆ ಹೋಗುತ್ತೇನೋ ಎಂಬ ಆತುರ ಹೆಚ್ಚಾಗುತ್ತಿತ್ತು. ಇಂತಹ ಅನುಭವಗಳನ್ನು ಪಡೆದ ನಾನೇ ಧನ್ಯ ಎಂಬ ಭಾವನೆ.
ಆಶಾ ಶ್ರೀನಿವಾಸ್

ಓಂ ಶ್ರೀ ಸದ್ಗುರುವೇ ನಮ
ಶ್ರೀ ಸದ್ಗುರುವೇ ನಮಃ
ಶ್ರೀ ಶ್ರೀ ಶ್ರೀ ಮಂಜುನಾಥ ಗುರುಗಳ ಪಾದಾರವಿಂದಗಳಿಗೆ ಸಾಷ್ಟಾಂಗ ನಮಸ್ಕಾರಗಳು.
ಸರ್ವಬಂಧುಗಳಿಗೆ ಪ್ರಣಾಮಗಳು.ವೀಣಾ ಅಮ್ಮನವರ ಬಗೆಗೆ ಏನಾದರೂ ನಮ್ಮ ಅನಿಸಿಕೆಯನ್ನು ಬರೆಯಲು ಸದಾವಕಾಶ ದೊರಕಿಸಿಕೊಟ್ಟ ಗುರುಗಳಿಗೆ ವಂದನೆಗಳು. ಏಕೆಂದರೆ ನನ್ನಂತಹ ಸಾಮಾನ್ಯಳಿಗೆ ಒಬ್ಬ ದೇವತಾ ಸ್ತ್ರೀಯ ಬಗೆಗೆ ಬರೆಯಲು ಅವಕಾಶ ದೊರಕಿದೆ ಎಂದರೆ ಪೂರ್ವ ಜನ್ಮದ ಪುಣ್ಯವೇ ಸರಿ.
ಬಂಧುಗಳೇ ವೀಣಾ ಅಮ್ಮನವರ ಸಾಮೀಪ್ಯ ಯಾರಿಗೆ ದೊರೆತಿದೆಯೋ ಅವರೆಲ್ಲರೂ ಪುಣ್ಯವಂತರು. ಮಾತೆಯ ವಾತ್ಸಲ್ಯಪೂರಿತ ನೋಟ ಇಂದಿಗೂ ಕಣ್ಣೆದುರಿಗೇ ಇದೆ. ಅದು ನಿರಂತರ. ಆಕೆಯೊಂದು ಸಾಗರ ಅವರ ಜೊತೆಗಿನ ನಮ್ಮ ಅನುಭವಗಳನ್ನು ನೆನೆಪಿಸಿಕೊಳ್ಳುವುದು ಸಾಗರದಿಂದ ಮುತ್ತುಗಳನ್ನು ಹೆಕ್ಕಿ ತೆಗೆದಂತೆ ಅಪೂರ್ವ ಅನುಭವ.
ಅಮ್ಮ ಅವರನ್ನು ನೋಡಿದ ಮೊದಲನೆ ದಿನ ಇಂದಿಗೂ ನೆನಪಿದೆ. ಈ ಐದಾರು ವರ್ಷಗಳ ಹಿಂದೆ ಗುರುಗಳ ಮನೆಗೆ ಮೊದಲ ಸಲ ಬಂದಿದ್ದೆ. ಬೆಲ್ ಮಾಡಿದಾಗ ಅಮ್ಮಾ ಅವರೆ ಬಂದು ಬಾಗಿಲು ತೆಗೆದರು, ನಗುನಗುತ್ತಾ ಅವರು “ಬನ್ನಿ” ಎಂದದ್ದು ನಮ್ಮ ದುಖಃಗಳನೆಲ್ಲಾ ಗಾಳಿಗೊಡ್ಡಿ ನೀವು ಸಂತೋಷವಾಗಿ ಒಳಬನ್ನಿ ಎಂದಂತಿತ್ತು. ಆ ದ್ವನಿಯಲ್ಲಿನ ಮಾಧುರ್ಯತೆ, ಪ್ರೀತಿ ಎಂತಹವರಿಗೂ ನೋವನ್ನು ಮರೆಸುವಂತ್ತಿತ್ತು. ಅಷ್ಟೇ ಅಲ್ಲ ಮೊದಲನೇ ಸಲ ನೋಡುವವರಿಗೂ ಜನ್ಮದ ಸಂಬಂಧವೇನೋ ಎಂಬಂತೆ. ಅವರು ಉಪಚರಿಸಿದಾಗ ದೇವರು ನಮ್ಮನ್ನು ಸರಿಯಾದ ಜಾಗದಲ್ಲಿ ಬಿಟ್ಟಿದ್ದಾನೆ ಎಂದೆನಿಸಿತ್ತು. ಅಂದಿನಿಂದ ಇಂದಿನವರೆಗೂ ಅವರು ತೋರಿಸುತ್ತಿದ್ದ ಪ್ರೀತಿ, ಆತ್ಮೀಯತೆ ಅಪಾರ.
ನಿಜ ಹೇಳಬೇಕಂದರೆ ಗುರುಗಳ ಬಳಿಬರುವವರೆಲ್ಲಾ ತಮ್ಮದೇ ಆದ ಕಷ್ಟವನ್ನು ಹೊತ್ತುಕೊಂಡು ಬರುತ್ತಾರೆ. ಹಾಗೆ ಬಂದವರು ಅವರ ಮನೆ ಹೊಸ್ತಿಲಲ್ಲೇ ಅರ್ಧ ಕಷ್ಟವನ್ನು ಇಳಿಸುತ್ತಾರೆ, ಏಕೆಂದರೆ ಅವರಿಗೆ ಅಮ್ಮಾವರ ದರ್ಶನವಾಗುತ್ತದೆ. ಇದು ನನ್ನ ಸ್ವಂತ ಅನುಭವ. ನಾನು ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ಗುರುಗಳ ಮನೆಗೆ ಬರುತ್ತಿದ್ದೆ. ಅಮ್ಮನವರ ದರ್ಶನವಾಗುತ್ತಿಂದ್ದಂತೇಯೇ ಅರ್ಧ ನೋವನ್ನು ಮರೆಯುತ್ತಿದ್ದೆ. ಗುರುಗಳ ದರ್ಶನವಾಗುತ್ತಿಂದಂತೆ ಪೂರ್ಣವಾಗಿ ಮರೆತು ಹೋಗುತ್ತಿದ್ದೆ. ಎಷ್ಟೊ ಬಾರಿ ಏನೂ ಇಲ್ಲವೆಂದು ತಿಳಿಸಿದ್ದೇನೆ, ಏಕೆಂದರೆ ಆ ನೋಟದಲ್ಲಿ “ನಾನಿದ್ದೇನೆ ಹೆದರಬೇಡ” ಎಂಬ ಆಶ್ವಾಸನೆ ಇರುತ್ತದೆ. ಮಾತುಗಳ ಅವಶ್ಯಕತೆಯೇ ಬೀಳುವುದಿಲ್ಲ.
ನಾನು ಒಮ್ಮೆ ಗುರುಗಳನ್ನು ಜರೂರಾಗಿ ನೋಡಬೇಕೆಂದು ದಾವಣಗೆರೆಯಿಂದ ಸೀದಾ ಗುರುಗಳ ಮನೆಗೆ ಹೋದೆನು. ತಿಂಡಿಯನ್ನು ತಿನ್ನಲು ಸಮಯವೂ ಇರಲಿಲ್ಲ, ಮನಸ್ಸೂ ಇರಲಿಲ್ಲ. ಬಾಗಿಲು ತೆಗೆದ ಅಮ್ಮನವರು ನನ್ನನ್ನು ನೋಡುತ್ತಿಂದ್ದಂತೆಯೇ ಸೀದಾ ಇಲ್ಲಿಗೇ ಬಂದಿದ್ದೇರೆಂದು ಕಾಣುತ್ತದೆ, ಕುಳಿತುಕೊಳ್ಳಿ ಬರುತ್ತೇನೆ ಎಂದು ಒಳಗೆ ಹೋದವರು ಕಾಫಿಯೊಂದಿಗೆ ಪ್ರತ್ಯಕ್ಷವಾಗಿದ್ದರು. ನನಗೆ ತುಂಬಾ ತಲೆ ನೋಯುತ್ತಿತ್ತು, ಕಾಫಿಯ ಅವಶ್ಯಕತೆ ಬಹಳವಾಗಿತ್ತು, ಅಮ್ಮ ತೆಗೆದುಕೊಳ್ಳಿ ಎಂದಾಗ ಸಂಕೋಚವಿಲ್ಲದೆ ತೆಗೆದುಕೊಂಡಿದ್ದೆ. ಮುಖ ನೋಡಿದ ಕೂಡಲೇ ನಮಗೆ ಬೇಕಾದ್ದು ಅವರಿಗೆ ಅನುಭವವಾಗುತ್ತಿತ್ತೆನೋ ಎಂದೆನಿಸಿತ್ತು.
ಮೊದಮೊದಲು ಅಮ್ಮನವರ ದೈವತ್ವದ ಅರಿವಿರಲಿಲ್ಲ ಕ್ರಮೇಣ ಅವರ ಒಡನಾಟ ಬೆಳೆದಾಗ ಅರಿವಾಗತೊಡಗಿತು. ಅಮ್ಮನವರ ತಾಳ್ಮೆ ಅಪಾರ, ಯಾವ ಕ್ಷಣಕ್ಕೂ ಅವರು ಬೇಸರ ಪಡುತ್ತಿರಲಿಲ್ಲ. ಮನೆಗೆ ಬಂದ ಪ್ರತಿಯೊಬ್ಬರಿಗೂ ಪ್ರೀತಿಯಿಂದ ಕೂಡಿಸಿ, ಮಾತನಾಡಿಸಿ, ಅವರು ಬಂದಿರುವ ವಿಷಯವನ್ನು ಗುರುಗಳಿಗೆ ತಿಳಿಸುತ್ತಿದ್ದರು. ಅದೆಷ್ಟು ಬಾರಿ ಮೆಟ್ಟಿಲು ಹತ್ತಿ ಇಳಿಯುತ್ತಿದ್ದರೋ, ಆದರೂ ಬೇಸರದ ಛಾಯೆ ಅವರ ಮುಖದಲ್ಲಿ ಸುಳಿಯುತ್ತಿರಲಿಲ್ಲ. ಹಾಗೆಯೆ ಮನೆಗೆ ಬಂದ ಪ್ರತಿ ಮುತ್ತೈದೆಯರಿಗೂ ಅಮ್ಮಾವರು ತಾಂಬೂಲವನ್ನು ಕೊಡದೆ ಕಳುಹಿಸುತ್ತಿರಲಿಲ್ಲ. ಅವರು ಏನೇ ಕೆಲಸ ಮಾಡುತ್ತಿರಲಿ ಅದನ್ನು ಅಲ್ಲಿಯೇ ಬಿಟ್ಟು ಬಂದು ಕುಂಕುಂಮ ತಾಂಬೂಲ ಕೊಟ್ಟು ಒಳ್ಳೆದಾಗಲಿ ಹೋಗಿ ಬನ್ನಿ ಎನ್ನುತ್ತಿದ್ದರು. ಗುರುಗಳ ಕೊಠಡಿ ಸದ್ಗುರು ಮಂದಿರಕ್ಕೆ ಸ್ಥಳಾಂತರವಾದ ಮೇಲೆ ನಮಗೆ ಪುಣ್ಯ ಅಲಭ್ಯವಾಯಿತು. ಮನಸ್ಸು ಪ್ರತೀ ಬಾರಿಯೂ ಅವರನ್ನು ಹುಡುಕುತ್ತಿತ್ತು, ಅವರನ್ನು ನೋಡಲು ಹೋಗೋಣ ಎನಿಸುತ್ತಿತ್ತು. ಅದಕ್ಕೆ ಹಾಗೆಯೇ ಮನೆಯ ಬಾಗಿಲ ಕಡೆ ಮುಖ ಮಾಡಿ ನಮಸ್ಕಾರ ಮಾಡುತ್ತಿದ್ದೆ.
ಪೂರ್ವ ಜನ್ಮದ ಪುಣ್ಯದ ಫಲದಿಂದ ನಮಗೆ ಅಮ್ಮನವರ ಪಾದದ ಧೂಳಿನಿಂದ ನಮ್ಮ ಮನೆ ಪಾವನವಾಯಿತು. ಹೌದು ಅಮ್ಮ ಮತ್ತು ಗುರುಗಳು ನಮ್ಮ ಮನೆಗೆ ಬಂದಿದ್ದು ಶ್ರೀರಾಮ ಸೀತೆಯ ಪ್ರವೇಶವೇ ಎಂದು ಹೇಳಬೇಕು. ಅವರು ಎಷ್ಟು ಸಾಮಾನ್ಯರಂತೆ ಇರುತ್ತಿದ್ದರು. ಈಗನಿಸುತ್ತದೆ ದೇವರು ಸಾಮಾನ್ಯ ಮನುಷ್ಯರಂತೆ ನಮ್ಮೊಡನಿದ್ದು ನಮಗೆ ದಾರಿ ತೋರಿಸುತ್ತಾರೆ.
ಅವರ ಒಡನಾಟದ ಪುಣ್ಯ ಎಲ್ಲರಿಗೂ ಲಭ್ಯವಿಲ್ಲ ಬಿಡಿ. ಯಾವ ಜನ್ಮದ ಪುಣ್ಯದ ಫಲವೋ ನಮಗೆ ದೊರಕಿದೆ. ಸತ್ಪುರುಷರು ನಮ್ಮೊಡನಿದ್ದು ನಮ್ಮಂತೆಯೇ ಜೀವನ ನಡೆಸಿ ನಮಗೆ ಬದುಕಿನ ಪಾಠ ಕಲಿಸುತ್ತಾರೆ. ಆ ಪಾಠದಲ್ಲಿ ಒಂದಕ್ಷರ ಕಲಿತರೂ ನಮ್ಮ ಜೇವನ ಸಾರ್ಥಕವೇ.
ಅಮ್ಮ ಈಗ ದೈಹಿಕವಾಗಿ ನಮ್ಮೊಡನಿಲ್ಲ, ಆದರೆ ಅವರು ನಮ್ಮ ಆತ್ಮದಲ್ಲಿ ಜೀವಂತವಾಗಿದ್ದಾರೆ. ಗುರುಗಳಿಗೆ ನಮಸ್ಕರಿಸುವಾಗ ಅಮ್ಮನವರು ಆಶೀರ್ವದಿಸುವಂತೆ ಭಾಸವಾಗುತ್ತದೆ. ಪುಣ್ಯಾತ್ಮರೇ ಹಾಗೆ ತಾವು ಭೂಮಿಗೆ ಬಂದ ಉದ್ದೇಶವನ್ನು ಸದ್ದಿಲ್ಲದಂತೆ ಮಾಡಿ ನಮಗೆ ಅದರ ಸಾಗರವನ್ನು ಬಿಟ್ಟು ಹೋಗಿರುತ್ತಾರೆ. ಅವರಿಗೆ ಯಾರೂ ತಮ್ಮನ್ನು ಗುರುತಿಸಬೇಕೆಂಬ ಆಸೆಯಿರುವುದಿಲ್ಲ. ಯಾರು ತಮ್ಮನ್ನು ನೋಡಲೀ-ಬಿಡಲಿ, ಗುರುತಿಸಲೀ-ಗುರುತಿಸದಿರಲಿ ಅವರಿಗೆ ಇದಾವುದರ ಪರಿವೆ ಇರುವುದಿಲ್ಲ. ಅವರ ದೃಷ್ಟಿ ಪೂರ ಅವರ ಉದ್ದೇಶದ ಕಡೆಗಿರುತ್ತದೆ ಅದು ಅವರಿಗೆ ಸ್ಪಷ್ಠ. ಅದನ್ನು ಪೂರೈಸಿದ ನಂತರ ಹಾಗೆಯೇ ತೆರಳುತ್ತಾರೆ.
ಅಮ್ಮಾ ಅವರ ತಾಳ್ಮೆ, ಪ್ರೀತಿ, ಶ್ರದ್ದೆ ಇವುಗಳ ಒಂದು ಕಣವನ್ನಾದರೂ ನಾವು ಅಭ್ಯಾಸ ಮಾಡಿದರೆ ಅವರ ಪ್ರಯತ್ನ ಸಾರ್ಥಕ. ಅವರ ಕುಡಿಗಳಾದ ಮಾಧುರಿ ಮತ್ತು ಸುಹಾಸ್ ಅವರ ಪ್ರತೀಕ.
ಅಮ್ಮಾ ನಾನು ಹಾಗೂ ನನ್ನ ಕುಟುಂಬದವರೆಲ್ಲರೂ ನಿಮಗೆ ಚಿರರುಣಿ. ಯಾವಗಲೂ ನಿಮ್ಮ ಪ್ರೀತಿಯ ಹಸ್ತ್ರ ನಮ್ಮ ಮೇಲಿರಲಿ ಹಾಗೂ ನಿಮ್ಮ ನೆನಪು ನಿತ್ಯ ಹಾಗೂ ನಿರಂತರ. ನಿಮ್ಮ ಆಶೀರ್ವಾದದ ನೆರಳಿನಲ್ಲಿ ಸದಾ ಇರುವೆವು.
ಬಂಧುಗಳೆ ವಿಷಯವನ್ನು ಅರಿಕೆ ಮಾಡಿಕೊಳ್ಳುವುದರಲ್ಲಿ ತಪ್ಪುಗಲೇನಾದರೂ ಇದ್ದರೆ ಕ್ಷಮಿಸಿ, ಪದಗಳ ಬಳಕೆ ತಪ್ಪಾದರೂ ಭಾವನೆ, ಪ್ರೀತಿ ಮುಖ್ಯ.
Smt. Vandana Puranthar

ಓಂ ಶ್ರೀ ಸದ್ಗುರುವೇ ನಮ:
ಅಮ್ಮನವರ ಸೇವೆಯ ಭಾಗ್ಯ
ಶ್ರೀ ಮಂಜುನಾಥ ಗುರೂಜಿ ಅವರ ಪಾದಗಳಿಗೆ ವಂದನೆಗಳನ್ನು ಅರ್ಪಿಸುತ್ತಾ ನಾನು ಅಮ್ಮನವರ ಜೊತೆ ಇದ್ದ ಕ್ಷಣಗಳು ಮತ್ತು ಅಮ್ಮನವರ ಸೇವೆ ಮಾಡುವ ಸೌಭಾಗ್ಯ ನನಗೆ ಸಿಕ್ಕ ಬಗ್ಗೆ ಒಂದೆರಡು ಮಾಹಿತಿಯನ್ನು ತಿಳಿಸಲು ಇಚ್ಚಿಸಿತ್ತೇನೆ.
ನಾನು ಕಂಡಂತೆ ಅಮ್ಮನವರು ಸಹನೆ ಮತ್ತು ವಿಶ್ವಾಸದ ಪ್ರತಿರೂಪ. ಕಲೆದ 27 ತಿಂಗಳು ನನ್ನ ಮತ್ತು ಶ್ರೀ ಗುರೂಜಿಯವರ ಸಂಪರ್ಕ ಮತ್ತು ಒಡನಾಟದಲ್ಲಿ ಅಮ್ಮನವರ ಅಂತಿಮ ದಿನಗಳಲ್ಲಿ ನನಗೆ ಅಮ್ಮನವರ ಸೇವೆ ಮಾಡಲು ಸಿಕ್ಕ ಅವಕಾಶ ನನ್ನ ಸೌಭಾಗ್ಯವೇ ಸರಿ.
ಮೊದ ಮೊದಲು ಶ್ರೀ ಗುರೂಜಿಯವರು ನನಗೆ ಸಾಗರದ ಹತ್ತಿರ ನರಸೀಪುರಕ್ಕೆ ಕೆಲವೊಂದು ಔಷದವನ್ನು ತರಲು ಕಳಿಸಿದಾಗ ನನಗೆ ಅಮ್ಮನವರ ಆರೋಗ್ಯದ ಸಮಸ್ಯೆ ಬಗ್ಗೆ ಅರಿವೇ ಇರಲಿಲ್ಲ. ಆದರೆ ಒಂದು ದಿನ ನನಗೆ ಅಮ್ಮನವರ ಆರೋಗ್ಯದ ಸಮಸ್ಯೆ ತಿಳಿದುಕೊಳ್ಳುವ ಅವಕಾಶ ಆ ಪರಮಾತ್ಮನೇ ಒದಗಿಸಿದರು. ಅಂದಿನಿಂದ ಪ್ರತಿ ತಿಂಗಳು ಅಮ್ಮನವರ ಆರೋಗ್ಯದ ಸುದಾರಣೆಗೆ ನಾನು ರಾಯಭಾರಿಯಾಗಿ ಔಷದಿ ತರುವ ಸೇವೆ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಸುಕೃತ.
ಪ್ರತಿಸಲ ನಾನು ನರಸೀಪುರಕ್ಕೆ ಹೋದಾಗ ಅಮ್ಮನವರು ನನ್ನನ್ನು ಸಂಪರ್ಕಿಸಿ ಅಲ್ಲಿನ ಪಂಡಿತರಿಂದ (ಶ್ರೀ ನಾರಾಯಣ ಮೂರ್ತಿ) ಔಷದವನ್ನು ತರಿಸಿಕೊಳ್ಳುತ್ತಿದ್ದರು. ಈ ಒಂದು ಪವಿತ್ರಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಪೂರ್ವ ಜನ್ಮಗಳ ಅದೃಷ್ಟವೇ ಸರಿ.
ಆದರೆ ನಾವು ಒಂದು ಬಯಸಿದರೆ ದೈವದ ನಿರ್ಧಾರವೇ ಬೇರೆ ಇರುತ್ತದೆ. ಹಾಗಾಗಿ ನಾವು ಅಮ್ಮನವರನ್ನು ಬಹಳ ದಿನಗಳ ಕಾಲ ನಮ್ಮೊಂದಿಗೆ ಉಳಿಸಿಕೊಳ್ಳಲು ಆಗಲಿಲ್ಲ.
ನಾವೆಲ್ಲರೂ ಅಮ್ಮನವರನ್ನು ಬಿಟ್ಟು ನಿರಾದಾರರೇ?
ಪ್ರತಿಯೊಬ್ಬ ಸದ್ಗುರುವಿನ ಧ್ಯೇಯವೂ ಒಂದೆ. “ನಾವು ಎಲ್ಲಿಯಾದರೂ ಇರಲಿ, ಏನೇ ಮಾಡುತ್ತಿರಲಿ ಅಮ್ಮನವರನ್ನು ನಾವು ಸ್ಮರಿಸಿದಾಗಲೆಲ್ಲ ಅಮ್ಮನವರು ನಮ್ಮ ಬಳಿಯೇ ಇರುತ್ತಾರೆ”. ಈ ಕೆಳಗಿನ ಸಾರಾಂಶ ಬರೀ ಕಥೆಯಲ್ಲ, ಇದು ಅಮೃತ. ಇದನ್ನು ಸ್ವಾದಿಸುವವರಿಗೆ ಅಮ್ಮನವರ ದಿವ್ಯ ಶಕ್ತಿ, ಮಹತ್ವ ಮತ್ತು ಸರ್ವಜ್ಞತ್ವ ಅರ್ಥವಾಗುವುವು. ವಾದ ಮಾಡಲಿಚ್ಚಿಸುವವರು ಇದನ್ನು ಓದದಿರುವುದೇ ಮೇಲು. ಇಲ್ಲಿ ಬೇಕಾಗಿರುವುದು ತರ್ಕವಲ್ಲ, ನಿಶ್ಚಲ ಭಕ್ತಿ ಮತ್ತು ದೃಡ ವಿಶ್ವಾಸ. ಯಾರು ಸಂತರ ಭಕ್ತರೋ, ಅಂಥವರಿಗೆ ಈ ಸಾರಾಂಶ ಪ್ರಿಯವೆನಿಸುತ್ತದೆ. ಇತರರಿಗೆ ಅದಿ ಕಟ್ಟ ಕಥೆಯಂತೆ ತೋರುತ್ತದೆ.
ಅಮ್ಮನವರ ಪವ್ವಡ ಶಕ್ತಿ:
23-12-2014 ರಂದು ಶತೃಬಾಧೆಯಿಂದ ತತ್ತರಿಸಿದ ನಮ್ಮ ವಂಶವೃಕ್ಷ ಹೇಳಲು ಅಸಾಧ್ಯವಾದಂತಹ ನೋವುಗಳನ್ನು ಅನಿಭವಿಸುತ್ತಿರುವಾಗ ಸಾಯಂಕಾಲ 8:೦೦ ಗಂಟೆ ಸುಮಾರಿಗೆ ಶ್ರೀಮತಿ ಪದ್ಮಶ್ರೀಯವರ ಸಹಾಯದೊಂದಿಗೆ ಶ್ರೀ ಗುರೂಜಿಯವರ ಸಂಪರ್ಕ ದೊರೆಯಿತು. ಇದಕ್ಕಾಗಿ ನಾವು ಮತ್ತು ಸಂಸಾರದ ಸದಸ್ಯರು ಶ್ರೀಮತಿ ಪದ್ಮಶ್ರೀ ಅವರಿಗೆ ಜೀವನ ಪರ್ಯಂತ ಆಭಾರಿಯಾಗಿರುತ್ತೇವೆ.
ಪ್ರತಿಯೊಬ್ಬರು ಶ್ರೀಗುರೂಜಿಯವರಲ್ಲಿ ಅವರವರ ಸಮಸ್ಯೆಯನ್ನು ಹೇಳಿಕೊಂಡು ಅದಕ್ಕೆ ಪರಿಹಾರ ಪಡೆದಿರುವುದು ಅಕ್ಷರಸಹ ಸತ್ಯ. ಆದರೆ ನಾನು ನನ್ನ ಅಳಲನ್ನು ಶ್ರೀಗುರೂಜಿಯವರ ಸಂಗಡ ತೋಡಿಕೊಳ್ಳುವಾಗ ಅವರು ಯಾವ ಪರಿಸ್ಥಿತಿಯಲ್ಲಿ ಇದ್ದರು ಎಂಬುದು ಹೇಳಲು ಮತ್ತು ಊಹಿಸಿಕೊಳ್ಳಲು ಅಸಾದ್ಯ. ಅಂತಹ ಒಂದು ಸಂದಿಗ್ದ ಪರಿಸ್ಥಿತಿಯಲ್ಲೂ ಶ್ರೀಗುರೂಜಿಯವರು ನನ್ನ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ ಆ ರಾತ್ರಿ ಕಳೆಯುವವರೆಗೆ ಸಮಾದಾನ ಮಾಡಿ, ಮೂರನೇದಿನ ಬೆಳಿಗ್ಗೆ ನನಗೆ ಸದ್ಗುರು ಮಂದಿರದಲ್ಲಿ ಬೇಟಿಯಾಗಲು ಹೇಳಿದರು.
ಆ ಸುದ, ಮಧುರವಾದ ಕ್ಷಣಗಳು, ಸಮಸ್ಯೆಗೆ ಪರಿಹಾರ:
24-12-2014 ರ ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ ನಾನು ಸದ್ಗುರು ಮಂದಿರವನ್ನು ತಲುಪಿದಾಗ ಶ್ರೀಗುರೂಜಿಯವರು ನನ್ನನ್ನು ಬರಮಾಡಿಕೊಂಡು ಸಮಾದಾನವನ್ನು ಮಾಡಿ ಈ ಕೆಳಗಿನ ಮಾತುಗಳನ್ನು ಹೇಳಿದರು. ಇಂದು ನಿಮ್ಮ ಕರ್ತವ್ಯ/ಕಾರ್ಯಾಚರಣೆಯನ್ನು ಮಾಡಿ ನಾಳೆ 25-12-2014 ಸಾರ್ವಜನಿಕ ಸರ್ಕಾರಿರಜ ಇರುವುದರಿಂದ 26-12-2014 ಗುರುವಾರದತನಕ ಸ್ವಲ್ಪ ಸಾವದಾನವಾಗಿ ಇರಿ. ನಿಮಗೆ ಸರಿಯಾದ ದಾರಿ ತೋರಿಸಲು ಒಬ್ಬ ವ್ಯಕ್ತಿಯನ್ನು ನೇಮಕ ಮಾಡಿದ್ದೇನೆ. ಆ ವ್ಯಕ್ತಿಯು ಈಗ ತಿರುಪತಿಯಲ್ಲಿ ಇದ್ದು 26-12-2014 ರ ಗುರುವಾರ ನಿಮ್ಮನ್ನು ಸಂಪರ್ಕಿಸುವರು ಎಂದು ಸಮಾದಾನದ ಮಾತುಗಳನ್ನು ಹೇಳಿದರು ಮತ್ತು ಅಮ್ಮನವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಹೋಗಿ, ಅಮ್ಮನವರ ದಿವ್ಯಶಕ್ತಿಯಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಅತೀ ಶೀಘ್ರದಲ್ಲಿ ಪರಿಹಾರವಾಗುವುವು ಎಂದು ಹೇಳಿ ಸಮಾದಾನ ಪದಿಸಿದರು.
ಆದರೆ ಆ ಎರಡು ದಿನಗಳನ್ನು ಹೇಗೆ ಕಳೆಯುವುದು ಎಂದು ದಿಕ್ಕುತೋಚದೆ ದಿಗ್ಬ್ರಾಂತರಾಗಿ ಅನ್ನ ನೀರನ್ನುಸ್ಮರಿಸದೇ ಶ್ರೀ ಗುರೂಜಿಯವರನ್ನು ನೋಡುತ್ತಾ ಕುಳಿತಾಗ ಶ್ರೀ ಗುರೂಜಿಯವರ ಕೋಣೆಯನ್ನು ಬಿಟ್ಟು ಹೊರಡುವ ಸಂದರ್ಭ ಬಂತು-
ಪವಾಡ ನಡೆದದ್ದು ಇಲ್ಲಿ:
ಶ್ರೀ ಗುರೂಜಿಯವರಿಗೆ ನಮಸ್ಕರಿಸಿ ಅಮ್ಮನವರ ಫೋಟೊ ಮುಂದೆ ಕಣ್ಣುತುಂಬಾ ನೀರು ತುಂಬಿಕೊಂಡು ನಮ್ಮ ಅಳಲನ್ನು ಮತ್ತೊಮ್ಮೆ ಅಮ್ಮನವರ ಬಳಿ ಹೇಳಿಕೊಂಡಾಗ ಅಮ್ಮನವರ ಫೋಟೊದಿಂದ ಒಂದು ಹೂವು ಪ್ರಸಾದದ ರೂಪದಲ್ಲಿ ಕೆಳಗೆ ಬಿತ್ತು.
ವಿಚಿತ್ರ ದೃಶ್ಯ ಮತ್ತು ಅನುಭವ ಮತ್ತು ಉದ್ವೇಗಕ್ಕೆ ಒಳಗಾದ ಕ್ಷಣಗಳು:
ಅಮ್ಮನವರಿಗೆ ನಮಸ್ಕರಿಸಿ ಅವರು ಪ್ರಸಾದ ರೂಪದಲ್ಲಿ ಕೊಟ್ಟ ಹೂವನ್ನು ನೋಡಿಕೊಂಡು ಹೊರಗೆ ಬಂದು ನಮ್ಮ ಪಾದರಕ್ಷೆಗಳನ್ನು ದರಿಸಲು ಹೊರಗೆ ಬಂದಾಗ(ಕೇವಲ 10 ರಿಂದ 15 ಕ್ಷಣಗಳು) ಶ್ರೀ ಗುರೂಜಿಯವರು ಈ ಹಿಂದೆ ಹೇಳಿದ ವ್ಯಕ್ತಿಯು (26-12-2014 ಗುರುವಾರ ತಿರುಪತಿಯಿಂದ ಬಂದು ನಿಮ್ಮನ್ನು ಸಂಪರ್ಕಿಸುತ್ತಾರೆ ಎಂದು)ದೈವ ಸಂಬೂತರಾಗಿ ತಿರುಪತಿಯ ಪ್ರಸಾದದೊಂದಿಗೆ ನಮ್ಮ ಬರುವಿಕೆಯ ಎದುರು ನೋಡುತ್ತಾ ಕುಳಿತಿದ್ದ ದೃಶ್ಯವನ್ನು ನೋಡಿ ಆಶ್ಚರ್ಯ ಚಕಿತರಾಗಿ ದಿಗ್ಬ್ರಾಂತರಾದೆವು.
ತಕ್ಷಣವೇ ಆಪತ್ಬಾಂದವರಾಗಿ ಬಂದಿದ್ದ ಆ ವ್ಯಕ್ತಿಯವರ ಸಹಾಯದಿಂದ ನಮ್ಮ ವಂಶವೃಕ್ಷಕ್ಕೆ ಬಿದ್ದ ಕೊಡಲಿ ಪೆಟ್ಟಿನಿಂದ ನಮ್ಮನ್ನು ರಕ್ಷಿಸಿ ನಮ್ಮೆಲ್ಲರಿಗೂ ಮರು ಜೀವದಾನ ಮಾಡಿದ ಆ ತಾಯಿಯ ಪವಾಡ ವರ್ಣಿಸಲು ಅಸಾಧ್ಯ.
ಶ್ರದ್ಧೆ ಮತ್ತು ಭಕ್ತಿಯಿಂದ ಯಾರು ಈಗಲೂ ತಾಯಿಯ ಮೊರೆ ಹೋಗಿತ್ತಾರೊ ಅವರಿಗೆ ಯಾವ ಕಾರಣಕ್ಕು ತೊಂದರೆಗಳು ಬರುವುದಿಲ್ಲ.
ಇಂತಹ ಪವಾಡಗಳು ಅಮ್ಮನವರ ಬರೀ ಫೋಟೊದಿಂದಲೇ ಈಗಲೂ ನಡೆಯುತ್ತವೆ.
ನಂಬಿಕೆ ಮತ್ತು ತಾಳ್ಮೆಯಿಂದ ನಾವುಗಳೆಲ್ಲರೂ ಅಮ್ಮನವರ ಮತ್ತು ಶ್ರೀ ಗುರೂಜಿಯವರ ಸೇವೆ ಮಾಡುತ್ತಾ ಹೋದರೆ ನಮ್ಮೆಲ್ಲರಿಗೂ ಖಂದಿತ ಮೋಕ್ಷದ ದಾರಿ ಸಿಗುವುದರಲ್ಲಿ ಸಂದೇಹವೇ ಇಲ್ಲಾ.
“ಶುಭಮಸ್ತು”
Manoj Kumar

“ಶ್ರೀ”
ನಿರ್ಮಲ ಹೃದಯದಿಂದ ಎಲ್ಲರ ಮನಗೆದ್ದ ನನ್ನ ಅಕ್ಕ ವೀಣಾ
ಎಲ್ಲರ ಮನಸ್ಸನ್ನು ತಾಳ್ಮೆಯಿಂದ ಅರಿತು
ಎಲ್ಲರ ನೋವಿಗೆ ಸ್ಪಂದಿಸಿ ಸಹಕರಿಸಿದಳು ನನ್ನ ಅಕ್ಕ
ಕಷ್ಠಗಳಿಗೆ ಎದೆಗುಂದದೆ ಛಲದಿಂದ ಎಲ್ಲರಿಗೂ
ಸ್ಪೂರ್ತಿಯಾಗಿರುವ ಪ್ರತಿಭಾನ್ವಿತೆ ನನ್ನ ಅಕ್ಕ
ಅವಳ ಕರ್ತವ್ಯ ಹಾಗು ಕಾರ್ಯಗಳಲ್ಲಿ ತಲ್ಲೀನಳಾಗಿ
ಅಚ್ಚುಕಟ್ಟಾಗಿ ಕ್ರಿಯಾಶೀಲತೆಯಿಂದ ನಿರ್ವಹಿಸುತ್ತಿದ್ದ ನನ್ನ ಅಕ್ಕ
ತನ್ನ ಕಾರ್ಯಗಳಿಂದ ಫಲಾಪೇಕ್ಷೆಯನ್ನು ನಿರೀಕ್ಷಿಸದೆ
ಎಲ್ಲರನ್ನು ಗೌರವಿಸಿ ಸದ್ಭಾವನೆಗಳಿಂದ ಎಲ್ಲರ ಪ್ರೀತಿಯನ್ನುಗಳಿಸಿದ ನನ್ನ ಅಕ್ಕ
ತನ್ನ ಜೀವನದ ಏರುಪೇರುಗಳಲ್ಲಿ ತನ್ನ ಮೇಲಿನ
ಆತ್ಮವಿಶ್ವಾಸನವನ್ನು ಕಳೆದುಕೊಳ್ಳದೆ ಎಲ್ಲಾ ಸಮಯದಲ್ಲೂ
ಹಸನ್ಮುಖಿಯಾಗಿ ಸ್ವೀಕರಿಸುತಿದ್ದ ನನ್ನ ಅಕ್ಕ
ಸದಾ ಮುಗುಳುನಗೆಯಿಂದ ಹಾಗು ನಿರ್ಮಲ ಮನಸ್ಸಿಂದ
ಸ್ವಚ್ಚವಾಗಿ ಕಾರ್ಯಗಳನ್ನು ನಿರ್ವಹಿಸಿ ಮಾತೆಯ
ಸ್ವರೂಪಿಯಾಗಿರುವ ನನ್ನ ಪ್ರೀತಿಯ ಅಕ್ಕಳಿಗೆ ನನ್ನ ನಮನ
-ನಾಗಲಕ್ಷ್ಮಿ.ವೈ.ಎ
ಸಿಟಿಎ
